Monday, 27 August 2012

How Siddaganga Mutt Established

ಶ್ರೀ ಸಿದ್ಧಗಂಗಾ ಮಠದ ಕಿರು ಪರಿಚಯ 
      
      ಶ್ರೀ  ಸಿದ್ಧಗಂಗಾ ಮಠವು ಭಾರತದ ಸುಪ್ರಸಿದ್ಧ ಧರ್ಮ ಕ್ಷೇತ್ರಗಳಲ್ಲಿ ಒಂದು. ಕನ್ನಡ ನಾಡಿನ ಪ್ರಮುಖ ಮಠಗಳಲ್ಲಿ ಹೆಸರುವಾಸಿಯಾಗಿದೆ. ಸುಮಾರು 600 ವರ್ಷಗಳಿಗೂ ಹಿಂದೆ ಶ್ರೀ ಗೋಸಲ ಸಿದ್ಧೇಶ್ವರರು ಇಲ್ಲಿ ಲೋಕ ಕಲ್ಯಾಣವಾರ್ಥವಾಗಿ ತಪಸ್ಸನ್ನಾಚರಿಸುತಿದ್ದರು. ಅವರ ಸಮಕಾಲೀನರಾದಂತ ನೂರೆಂಟು ಸಂತರು ಶ್ರೀ ಮಠದ ಗುಹೆಗಳಲ್ಲಿ ತಪಸ್ಸು ಮಾಡುತಿದ್ದರು. ಒಮ್ಮೆ ಆ ಸಂತರಲ್ಲಿ ವಯಸ್ಸಾದ ತಪಸ್ವಿಗಳೊಬ್ಬರಿಗೆ ರಾತ್ರಿ ವೇಳೆ ಬಾಯಾರಿಕೆಯಿಂದ  ಬಳಲುವಂತಾಯಿತು ಆಗ ಶ್ರೀ ಗೋಸಲ ಸಿದ್ಧೇಶ್ವರರು ತಮ್ಮ ಕೈಯಿಂದ  ಬಂಡೆಯನು ಬಗೆದು, ಬಂದ ಗಂಗೆಯಿಂದ ಆ ತಪಸ್ವಿಗಳ ಪ್ರಾಣ ಉಳಿಸಿದರು. ಆ ಉದ್ಭವಿಸಿದ ಗಂಗೆಯೇ ಸಿದ್ಧಗಂಗೆಯೆಂದು ಲೋಕ ವಿಖ್ಯಾತವಾಯಿತು. ಅಂದಿನಿಂದ ಶ್ರೀ ಕ್ಷೇತ್ರ  "ಶ್ರೀ ಸಿದ್ಧಗಂಗಾ ಕ್ಷೇತ್ರ" ವೆಂದು ಪ್ರಸಿದ್ಧವಾಯಿತು.


ಸಿದ್ಧಗಂಗಾ  ಬೆಟ್ಟ



        ಶ್ರೀ ಸಿದ್ಧಗಂಗಾ  ಕ್ಷೇತ್ರ ಸಿದ್ಧರು ಮೆಟ್ಟಿದ ಭೂಮಿ, ತಪೋನಿಷ್ಟರ ಪುಣ್ಯ ಭೂಮಿ.ಇಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರರು ತಪಸ್ಸನ್ನಾಚರಿಸಿ ಪವಿತ್ರ ಕ್ಷೇತ್ರವನ್ನಾಗಿಸಿದ್ದಾರೆ. ಅವರು ತಪಸ್ಸು ಮಾಡಿದ ಸ್ಥಳದಲ್ಲಿಂದು ಶ್ರೀ ಸಿದ್ಧಲಿಂಗೇಶ್ವರರ ದೇವಾಲಯವಿದೆ. ಮುಂಭಾಗದ ಗುಹೆಯಲ್ಲಿ ಶ್ರೀ ಮಾತೇ ಸಿದ್ಧಗಂಗಮ್ಮನವರ ಪವಿತ್ರ ಮಂದಿರವಿದೆ ಮತ್ತು ತೀರ್ಥ ಕುಂಡವಿದೆ.


ಶ್ರೀ ಗಂಗಾ ಮಾತೇ

ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ
      ಅಂದಿನಿಂದಲೂ ಶ್ರೀ ಮಠವು ಭಕ್ತಿ, ಶ್ರದ್ಧೆಗಳಿಗೆ ಹೆಸರಾಗಿ ಹಲವಾರು ಭಕ್ತಾದಿಗಳ ಮನಸೆಳೆದಿದೆ. ಇಲ್ಲಿನ ಗಂಗೆಯು ಜನರ ಪಾಪವನ್ನು ತೊಳೆದು ಸನ್ಮಂಗಳವನ್ನು ಉಂಟುಮಾಡಿದ್ದಾಳೆ. ಸ್ತ್ರೀಯರು ತಮ್ಮ ಸೌಭಾಗ್ಯಗಳನ್ನು ಬೇಡಿ ಶ್ರೀ ಮಾತೆಯಲ್ಲಿ ಹರಿಕೆ ಸಲ್ಲಿಸುವುದು ವಾಡಿಕೆಯಲ್ಲಿದೆ.


ಶ್ರೀ ಉದ್ದಾನ ಶಿವಯೋಗಿಗಳು
          ಶ್ರೀ ಗೋಸಲ ಸಿದ್ಧೇಶ್ವರರಾದ ಮೇಲೆ ಶ್ರೀ ಕ್ಷೇತ್ರದ ಗುರು ಪರಂಪರೆಯಲ್ಲಿ ಬಂದವರೆಂದರೆ ಶ್ರೀ ನಂಜುಂಡ ಸ್ವಾಮಿಗಳು , ಶ್ರೀ ರುದ್ರ ಸ್ವಾಮಿಗಳು,
 ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಉದ್ದಾನ ಸ್ವಾಮಿಗಳು. ಶ್ರೀ ಸಿದ್ಧಲಿಂಗ ಸ್ವಾಮಿಗಳವರ ಅಧಿಕಾರದ ಸಮಯದಲ್ಲಿ ಉತ್ತರ ಕರ್ನಾಟಕದ ಕಡೆಯಿಂದ ದಯಮಾಡಿಸಿದ ಶ್ರೀ ಮುಪ್ಪಿನ ಸ್ವಾಮಿಗಳು ಮತ್ತು ಶ್ರೀ ಅಟವೀ ಸ್ವಾಮಿಗಳು ಶ್ರೀ ಕ್ಷೇತ್ರದಲ್ಲಿ ಕೆಲವು ಕಾಲ ಇದ್ದು ಅನುಷ್ಠಾನವನ್ನು ನಡೆಸುತ್ತಾ, ಶ್ರೀ ಮಠಕ್ಕೆ ಬರುತ್ತಿದ್ದ ಭಕ್ತಾಧಿಗಳಿಗೆ ಸಣ್ಣ ಪ್ರಮಾಣದಲ್ಲಿ ದಾಸೋಹವನ್ನು ಪ್ರಾರಂಭಿಸಿದರು. ಶ್ರೀ ಉದ್ದಾನ ಸ್ವಾಮಿಗಳು ದಾಸೋಹವನ್ನು ಮುಂದುವರಿಸುತ್ತಾ ಬಂದರು. ಅಂದು ದಾಸೋಹಕ್ಕಾಗಿ ಹೊತ್ತಿಸಿದ ಒಲೆ ಇಂದು ಬೃಹತ್ತಾಗಿ ಬೆಳೆದಿರುವುದು ಜನ-ಜನಿತವಾಗಿದೆ. "ಸಿದ್ಧಗಂಗೆಯ ಊಟ ಚೆಂದ ಶಿವಗಂಗೆಯ ನೋಟ ಅಂದ " ಎಂದು ನಾಣ್ಣುಡಿಯಾಗಿದೆ.

ಪ್ರಸಾದ ತಯಾರಿಸುವ ಮಹಾಮನೆ 
       ಶ್ರೀ  ಉದ್ದಾನ ಸ್ವಾಮಿಗಳು ಸಿದ್ಧ  ಪುರುಷ ದಾರ್ಶನಿಕರು, ಅನುಭಾವಿಗಳು. ಅವರು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ಪ್ರಾರಂಭಿಸಿದರು. 1917ರಲ್ಲಿ ಸಂಸ್ಕತ ಪಾಠ ಶಾಲೆಯನ್ನು ಸಂಸ್ಥಾಪಿಸಿ ವಿದ್ಯಾದಾನಕ್ಕೆ ತಳಹದಿಯನ್ನು ಹಾಕಿದರು.
ಅಂದು ಪ್ರಾರಂಭವಾದ ಪಾಠಶಾಲೆ 1932ರಲ್ಲಿ ಸಂಸ್ಕತ ಕಾಲೇಜಾಗಿ
ಪರಿವರ್ತನೆಗೊಂಡು ಇಂದು ರಾಷ್ಟ್ರದಲ್ಲಿಯೇ ಬೃಹತ್ ಸಂಸ್ಕತ ಸಂಸ್ಥೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಶ್ರೀ ಮಠದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೆಲ್ಲರೂ ಸಂಸ್ಕತವನ್ನು ಅಭ್ಯಾಸ ಮಾಡಲೇಬೇಕೆಂಬ ನಿಯಮವಿದೆ.

ಧಾನ್ಯ ಸಂಷ್ಕರಣೆಯ  ನೋಟ 
     

      ಶ್ರೀ  ಉದ್ದಾನ  ಶಿವಯೋಗಿಗಳು  1917ರಲ್ಲಿಯೇ ಸಾರ್ವಜನಿಕ  ಉಚಿತ ವಿಧ್ಯಾರ್ಥಿನಿಲಯವನ್ನು ಪ್ರಾರಂಭಿಸಿ ಸರ್ವ ಜನಾಂಗದವರಿಗೂ ಅವಕಾಶ ಕಲ್ಪಿಸಿಕೊಟ್ಟರು. ಸರ್ಕಾರದ ಸಹಾಯವನ್ನು ನಿರೀಕ್ಷಿಸದೆ  ಎಲ್ಲರಿಗೂ ವಿದ್ಯಾರ್ಥಿನಿಲಯದ ಬಾಗಿಲು ತೆರೆದ ಶ್ರೀ ಉದ್ದಾನ ಸ್ವಾಮಿಗಳ ವಿಶಾಲದೃಷ್ಟಿ, ವಿಶ್ವ ಬಾಂಧವ್ಯ ಬಸವಾದಿ ಶರಣರು ಆಚರಿಸಿ ತೋರಿದ "ಇವನಾರವ  ಇವನಾರವ , ಇವ ನಮ್ಮವ, ಇವ ನಮ್ಮವ" ಎಂಬ  ಶರಣ ಸಿದ್ಧಾಂತಕ್ಕೆ ಕನ್ನಡಿಯಾಯಿತು. ಅಂದಿನಿಂದ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ  ವೃದ್ಧಿಗೊಂಡು ಇಂದು ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಏಕೈಕ ಬೃಹತ್ ಸಂಸ್ಥೆಯಾಗಿದೆ.
   
ಶ್ರೀ ಉದ್ದಾನ ಶಿವಯೋಗಿಗಳು  ಅಪೂರ್ವ ದ್ರಷ್ಟಾರರು. ತ್ರಿಕಾಲ ಜ್ಞಾನಿಗಳು. ಸಮಾಜ ಸಂಘಟಕರು. ಅವರು ಶಿವರಾತ್ರಿಯ  ಸಂಧರ್ಭದಲ್ಲಿ ಶ್ರೀ ಮಠದಲ್ಲಿ  ಹದಿನೈದು  ದಿನಗಳ ಪರ್ಯಂತ ವಿಜೃಂಭಣೆಯಿಂದ ನಡೆಯುವಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು  1902 ರಿಂದಲೇ ಪ್ರಾರಂಭಿಸಿದರು. ಲೋಕ ಕಲ್ಯಾಣಕ್ಕಾಗಿ ಶ್ರೀಗಳು ಕೈಗೊಂಡ ಪುಣ್ಯ ಕಾರ್ಯಗಳೆಲ್ಲಾ ಶಾಕೋಪ ಶಾಕೆಯಾಗಿ  ಬೆಳೆದು ಬಂದವು. 1930ರಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ  ಸ್ವೀಕರಿಸಿ ವಿರಕ್ತಾಶ್ರಮದ ಧೀಕ್ಷೆ  ಕೊಟ್ಟು ಸಂಸ್ಥೆಯ ಹಾಗು ಸಮಾಜದ ಸೇವೆಗೆಂದು ತರಭೇತಿ ಕೊಡುತ್ತಾ ಬಂದರು. 1941ರಲ್ಲಿ ಶ್ರೀ ಉದ್ದಾನ ಸ್ವಾಮಿಗಳು ಲಿಂಗೈಕ್ಯರಾದರು. ನಂತರ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಶ್ರೀ ಮಠದ ಅಧ್ಯಕ್ಷರಾಗಿ ಸಂಸ್ಥೆಯನ್ನು ನಭೂತೋ ಎಂಬಂತೆ ಬೆಳೆಸಿದ್ದಾರೆ.

ಮಠದ ಜಾತ್ರೆಯ ಒಂದು ದೃಶ್ಯ 












ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು 




 
       ಶ್ರೀ ಶ್ರೀ ಶಿವಕುಮಾರಸ್ವಾಮಿಗಳು ತ್ರಿಭಾಷಾ ವಿದ್ವನ್ಮಣಿಗಳು. ಸಂಸ್ಕೃತ, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯ ಪೂಜ್ಯರಿಗಿದೆ. ತಮ್ಮ ಗುರುಗಳು ಪ್ರಾರಂಭಿಸಿದ  ಜಾತ್ರೆ ಜ್ಞಾನಾನ್ನ ದಾಸೋಹವನ್ನು ಅತ್ಯಂತ ವೈಜ್ಞಾನಿಕ ಹಾಗು ವ್ಯವಸ್ಥಿತವಾಗಿ  ಬೃಹತ್ಪ್ರಮಾಣದಲ್ಲಿ ಬೆಳೆಸಿದ್ದಾರೆ. ಇಂದು ಜ್ಞಾನ ,ಅನ್ನ ,ವಸತಿಯನ್ನು ಸಾವಿರಾರು ಮಕ್ಕಳಿಗೆ ನೀಡುತ್ತಾ  ತ್ರಿವಿಧ ದಾಸೋಹ ಮೂರ್ತಿಗಳಾಗಿ ವಿಶ್ವದಾದ್ಯಂತ ಮಠದ ಕೀರುತಿಯನ್ನು ಬೆಳಗುತ್ತಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದು "ಅಕ್ಷರ ಕ್ರಾಂತಿಯನ್ನು" ಮಾಡಿದ್ದಾರೆ. ಪೂರ್ವ ಪ್ರಾಥಮಿಕ ಪಾಠಶಾಲೆಯಿಂದ ಪ್ರಾರಂಭಗೊಂಡು ಹಿರಿಯ ಪ್ರಾಥಮಿಕ ಪಾಠಶಾಲೆ, ಪ್ರೌಢಶಾಲೆ,ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಮಹಾವಿದ್ಯಾಲಯ, ಕನ್ನಡ ಪಂಡಿತ್ ಶಿಕ್ಷಣ ಸಂಸ್ಥೆ, ಅಂಧ ಮಕ್ಕಳ ಪಾಠಶಾಲೆ, ಉಪಾಧ್ಯಾಯ ತರಬೇತಿ ಸಂಸ್ಥೆ, ತಾಂತ್ರಿಕ ಕಾಲೇಜು, ಶಿಕ್ಷಣ ಕಾಲೇಜು, ಫಾರ್ಮಸಿ ಕಾಲೇಜು, ನರ್ಸಿಂಗ್ ಕಾಲೇಜು ಹೀಗೆ ಹಲವಾರು ಸಂಸ್ಥೆಗಳು ಸೇವೆಸಲ್ಲಿಸುತ್ತಿವೆ. ಈ ಎಲ್ಲಾ ಸೇವಾ ಸಂಸ್ಥೆಗಳ ಹಿಂದೆ  ಪರಮ  ಪೂಜ್ಯರ ಶ್ರಮ ಹಾಗು ಉದಾತ್ತ ಭಾವನೆಯಿದೆ.

         ಶ್ರೀ ಮಠದಲ್ಲಿ ನಡೆದಿರುವ ದಾಸೋಹವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಶ್ರೀ ಮಠಕ್ಕೆ ಬರುವ ಯಾತ್ರಾರ್ಥಿಗಳಿಗೆಲ್ಲ ಸದಾ ದಾಸೋಹದ ವ್ಯವಸ್ಥೆಯಿದೆ. ಶ್ರೀ ಗಳವರ ಶುದ್ಧ ಚಾರಿತ್ಯದ ದಿವ್ಯ ಜೋಳಿಗೆಯೇ ಎಲ್ಲವನ್ನು ನಡೆಸುತ್ತಿದೆ. ಶ್ರೀ ಕ್ಷೇತ್ರದಲ್ಲಿ ಅಕ್ಕಿಗಿರಣಿ, ಮುದ್ರಣಾಲಯ, ಜವಳಿ ಅಂಗಡಿ, ಸಹಕಾರ ಸಂಘ, ನಾಟಕ ಮಂಡಳಿ ಮುಂತಾದ ವಿವಿಧ ಶಾಖೆಗಳಿವೆ. ಎಲ್ಲವೂ ಶ್ರೀ ಪಾದರ ನೇತೃತ್ವದಲ್ಲಿ ಕೆಲಸ ಮಾಡುತ್ತಿವೆ.

ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು 
       ಪರಮ ಪೂಜ್ಯರು ಭಕ್ತಾಧಿಗಳ ಆಶಯ, ಅಪೇಕ್ಷೆ, ಪ್ರಾರ್ಥನೆಯ ಮೇರೆಗೆ 1988ರಲ್ಲಿ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ  ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಿ ವಿರಕ್ತಾಶ್ರಮ ದೀಕ್ಷೆಯನ್ನು ನೀಡಿ ಆಶೀರ್ವದಿಸಿದ್ದಾರೆ. ಕಿರಿಯ ಶ್ರೀಗಳು ವಿನಯ ಶೀಲರು, ಮೃದು ಭಾಷಿಗಳು, ಪದವೀಧರರು. ಹಿರಿಯ ಶ್ರೀ ಗಳ ಮಾರ್ಗದರ್ಶನದಲ್ಲಿ ಶ್ರೀ ಮಠದ ಕಾರ್ಯಗಳಲ್ಲಿ ಶುದ್ದ ಚಿತ್ತದಿಂದ ಸೇವೆಸಲ್ಲಿಸುತ್ತಿದ್ದಾರೆ.




1 comment: